ಅಭೀರರು

ಪ್ರಾಚೀನ ಭಾರತದಲ್ಲಿ ಬಂದು ನೆಲೆಸಿದ್ದ ಅನ್ಯದೇಶೀಯರು. ಕಾಂದಹಾರಜ ಸಮೀಪದ ಅಭಿರವನ್ ಎಂಬ ಸ್ಥಳದಿಂದ ವಲಸೆ ಬಂದವರೆಂದು ಊಹಿಸಲಾಗಿದೆ. ಈ ಜನ ಮುಖ್ಯವಾಗಿ ಅಪರಾಂತ ಎಂಬ ಪಶ್ಚಿಮ ಭಾರತ ಪ್ರದೇಶದಲ್ಲಿ ನೆಲೆಸಿದ್ದರು. ಪುರಾಣಗಳಲ್ಲಿ ಅಭೀರರು ಸಾತವಾಹನರ ಅನಂತರ ಆಳಿದರೆಂದು ಹೇಳಿದೆ. ಪತಂಜಲಿಯ ಮಹಾಭಾಷ್ಯದಲ್ಲಿ ಅಭೀರರ ನಿರ್ದೇಶನವಿದೆ. ಈ ಕುಲದ ಕೆಲವು ನಾಯಕರು ಶಕ ಮಹಾಕ್ಷತ್ರಪರ ಸೇನಾಪತಿಗಳಾಗಿದ್ದರು. ಅಭೀರ ಮರಾಠಿಪುತ್ರ ಈಶ್ವರಸೇನ ಮೂರನೆಯ ಶತಮಾನದಲ್ಲಿ ನಾಸಿಕದ ಪ್ರದೇಶದಲ್ಲಿ ಆಳಿದಂತೆ ಶಾಸನದಿಂದ ತಿಳಿಯುತ್ತದೆ. ಈತನ ಆಳ್ವಿಕೆಯ ವರ್ಷದಿಂದ (ಕ್ರಿ.ಶ. ಸು. 248) ಕಲಚುರಿ ಸಂವತ್ ಪ್ರಾರಂಭವಾಯಿತೆಂದು ಆಭಿಪ್ರಾಯವಿದೆ. ಮಯೂರವರ್ಮನ ಚಂದ್ರವಳ್ಳಿ ಶಾಸನದಲ್ಲಿ ಕದಂಬ ರಾಜ ಅಭೀರರನ್ನು ಜಯಿಸಿದನೆಂದು ಹೇಳಿದೆ. ಸಮುದ್ರಗುಪ್ತನಿಂದ ಪರಾಜಯ ಹೊಂದಿದ ನಾಯಕರಲ್ಲಿ ಅಭೀರರ ಹೆಸರಿದೆ.					

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ